ಅಟ್ಟರ್‍ಬರ್ಗನ ನಿಬಂಧನೆಗಳು

	ಹಲವಾರು ತರಹದ ಮಣ್ಣುಗಳನ್ನು ವಿಂಗಡಿಸುವ ಮತ್ತು ಗುರುತಿಸುವ ಒಂದು ವಿಧಾನ. ಭೂಮಿಯ ಮೇಲ್ಪದರ ಒಳಗೊಂಡಿರುವ ಮಣ್ಣುಗಳು ಅನೇಕರೀತಿಯ ಭೌತಿಕರೂಪಗಳನ್ನೂ ವರ್ಣಗಳನ್ನೂ ಹೊಂದಿದ್ದರೂ ಅವುಗಳ ಯಾಂತ್ರಿಕ ಗುಣಗಳ ದೃಷ್ಟಿಯಿಂದ ಅವು ಕೆಲವೇ ವರ್ಗಗಳಿಗೆ ಸೇರುತ್ತವೆ. ಈ ಯಾಂತ್ರಿಕ ಗುಣ ವಿಂಗಡಣೆಯ ವಿಧಾನಗಳಲ್ಲಿ ಅಟ್ಟರ್‍ಬರ್ಗನ ನಿಬಂಧನೆಗಳ ಮೂಲಕ ವಿಂಗಡಿಸುವ ವಿಧಾನ ಮುಖ್ಯವಾದುದು. ಈ ನಿಬಂಧನೆಗಳಿಗೆ ಮಂದತೆ ಅಥವಾ ಸಾಂದ್ರತೆ ನಿಬಂಧನೆಗಳು ಎಂದೂ ಹೆಸರು. ಮಣ್ಣುಗಳ ಸಾಂದ್ರತೆ ಅವುಗಳಲ್ಲಿ ಸೇರಿರುವ ಜಲಪ್ರಮಾಣ, ಮಣ್ಣುಕಣಗಳ ಗಾತ್ರ ವಿನ್ಯಾಸ, ಮತ್ತು ಇತರ ರಾಸಾಯನಿಕ ಗುಣಗಳನ್ನು ಅವಲಂಬಿಸಿರುತ್ತದೆ. ಇವುಗಳಲ್ಲಿ ಜಲಪ್ರಮಾಣ ಮುಖ್ಯವಾದುದು. ಇದು ಹೆಚ್ಚಿದಂತೆಲ್ಲ ಮಣ್ಣು ಮೆದುವಾಗುತ್ತ ಕಡೆಗೆ ದ್ರವರೂಪಕ್ಕೆ ಬರುತ್ತದೆ; ಕಡಿಮೆಯಾದಂತೆಲ್ಲ ಕ್ರಮೇಣ ಗಡಸಾಗಿ ಕಡೆಗೆ ಘನರೂಪಕ್ಕೆ ಬರುತ್ತದೆ. ಅಟ್ಟರ್‍ಬರ್ಗ್ ಸೂಚಿಸಿರುವಂತೆ ಯಾವ ಜಲಪ್ರಮಾಣ ಮಣ್ಣನ್ನು ದ್ರವರೂಪ ಮತ್ತು ಅತ್ಯಂತ ಮೆದುರೂಪ ಇವುಗಳ ಮಧ್ಯಸ್ಥಿತಿಗೆ ತರುವುದೋ ಆ ಜಲಪ್ರಮಾಣಕ್ಕೆ ದ್ರವನಿಬಂಧನೆ ಎಂದೂ ಅತ್ಯಂತ ಮೆದುರೂಪ ಮತ್ತು ಸಾಧಾರಣ ಮೆದುರೂಪ ಇವುಗಳ ಮಧ್ಯಸ್ಥಿತಿಯ ಜಲಪ್ರಮಾಣಕ್ಕೆ ಮೆದುನಿಬಂಧನೆ ಎಂದೂ ಸಾಮಾನ್ಯ ಮೆದುರೂಪ ಮತ್ತು ಘನರೂಪ ಇವುಗಳ ಮಧ್ಯಸ್ಥಿತಿಯ ಜಲಪ್ರಮಾಣಕ್ಕೆ ಉಡುಗುನಿಬಂಧನೆ ಎಂದೂ ಕರೆಯಲಾಗುತ್ತಿದೆ. ಇವು ಮೂರು ಅಟ್ಟರ್‍ಬರ್ಗನ ನಿಬಂಧನೆಗಳು. ಪ್ರಯೋಗ ಶಾಲೆಗಳಲ್ಲಿ ಕಂಡುಹಿಡಿಯುವುದಕ್ಕೆ ಬೇಕಾಗುವ ಸಾಧನೆಗಳನ್ನೂ ಇವುಗಳಲ್ಲಿ ನಮೂದಿಸಲಾಗಿದೆ. ಅಟ್ಟರ್‍ಬರ್ಗನ ನಿಬಂಧನೆಗಳನ್ನು ಸೂಕ್ತವಾದರೀತಿಯಲ್ಲಿ ಉಪಯೋಗಿಸಿಕೊಂಡು ಆಯಾ ಮಣ್ಣುಗಳ ಯಾಂತ್ರಿಕ ಗುಣಗಳನ್ನು ಅಂದಾಜು ಮಾಡಬಹುದು.

(ಕೆ.ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ